ಯುವ ಸ್ಯಾಕ್ಸೋಫೋನ್ ಕಲಾವಿದ: ಎಂ. ವೇಣುಗೋಪಾಲ್ ಪುತ್ತೂರು

ಕಲೆ ಎನ್ನುವುದು ಕೆಲವರಿಗೆ ರಕ್ತಗತವಾಗಿ ಬರುತ್ತದೆ. ಮತ್ತೆ ಕೆಲವರಿಗೆ ಪರಿಶ್ರಮ ಶ್ರದ್ಧೆಯಿಂದ ಬರುವುದು. ಯಾವುದರಲ್ಲಿ ನಮಗೆ ಅಭಿರುಚಿ ಇದೆ ಅದರಲ್ಲಿ ಸಾಧನೆ ಮಾಡಲು ಸಾಧ್ಯ. ಯುವ ಸ್ಯಾಕ್ಸೋಫೋನ್ ಕಲಾವಿದ ಎಂ. ವೇಣುಗೋಪಾಲ್ ಪುತ್ತೂರು ಇಂದು ಸ್ಯಾಕ್ಸೋಫೋನ್ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು.

ಇವರ ತಂದೆ ಉಮೇಶ್ ದೇವಾಡಿಗ, ತಾಯಿ ಸರಸ್ವತಿ. ಬಾಲ್ಯದಲ್ಲೇ ಸ್ಯಾಕ್ಸೋಫೋನ್ ಕಡೆಗೆ ಒಲವಿದ್ದು 7 ನೇ ತರಗತಿಯಲ್ಲಿರುವಾಗಲೇ ಸ್ಯಾಕ್ಸೋಫೋನ್ ಕಛೇರಿ ನೀಡಿದ ಹೆಗ್ಗಳಿಕೆ ಇವರದ್ದು, ಇವರ ಈ ಸಾಧನೆಗೆ ಹೆತ್ತವರು ಸದಾ ಪ್ರೋತ್ಸಾಹಕರು.

ಹಲವಾರು ಕಚೇರಿ ಕಾರ್ಯಕ್ರಮಗಳನ್ನು  ನೀಡಿ ಪ್ರಶಂಸೆಗೆ ಪಾತ್ರರಾಗಿದ್ಧಾರೆ. ಪುತ್ತೂರಿನ ಕಾರ್ಣಿಕ ಕ್ಷೇತ್ರ ಶ್ರೀ ಮಹಾಲಿಂಗೇಶ್ವರ ಜಾತ್ರಾ ವಿಶು ಸಂದರ್ಭದಲ್ಲಿ ಸ್ಯಾಕ್ಸೋಫೋನ್ ಕಲಾಸೇವೆ ನೀಡುತ್ತಿದ್ದಾರೆ. ಇವರ ಆರಂಭದ  ಗುರು ಗಾನಕೇಸರಿ ವಿದ್ವಾನ್ ಕುದ್ಮಾರ್ ವೆಂಕಟ್ರಮಣ ಭಟ್ , ದಿi ವಿದ್ವಾನ್ ದೇವದಾಸ್ ಸುಬ್ರಹ್ಮಣ್ಯ ಹಾಗೂ ವಿದ್ವಾನ್ ಆರ್ ಪ್ರಭಾಕರ್ ಶ್ರೀರಂಗಪಟ್ಟಣ ಮತ್ತು ರಾಜ್ ಶೇಖರ್ ಬೊಳುವಾರು ಇವರಿಂದ ಅಭ್ಯಾಸ ಮಾಡಿದ್ದಾರೆ. ಪ್ರಸ್ತುತ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ. ವಿದ್ವಾನ್ ಕದ್ರಿ ರಮೇಶ್ ನಾಥ್ ಅವರಿಂದ ಸ್ಯಾಕ್ಸೋಫೋನ್ ಅಭ್ಯಾಸ ಮಾಡುತ್ತಿದ್ದಾರೆ.  ದಕ್ಷಿಣಕನ್ನಡದ ಗಂಡು ಕಲೆ ಯಕ್ಷಗಾನದಲ್ಲೂ ಆಸಕ್ತಿಯುಳ್ಳ ಇವರು ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದರಾದ  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾI ಶ್ರೀಧರ ಭಂಡಾರಿ ಪುತ್ತೂರು ಇವರ ಶಿಷ್ಯರು.

ಎಂ. ವೇಣುಗೋಪಾಲ್ ಪುತ್ತೂರು ರವರು ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನಲ್ಲಿ ಪೂರೈಸಿ ಪದವಿ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಮುಗಿಸಿದರು. ಆ ಬಳಿಕ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ರಾಗಿ ಕೆಲಸ ನಿರ್ವಹಿಸಿದರು. ಇದೀಗ ಶ್ರೀ ಮಹಾ ರೂಫಿಂಗ್ ಎಂಬ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ. ಸರಳ ಸಜ್ಜನರಾದ ಶ್ರೀಯುತರು ಶ್ರೇಷ್ಠ ಸಾಧಕರಾಗಲೆಂದು ಹಾರೈಸುತ್ತೇವೆ. ಹಲವಾರು ಸಂಘಟನೆಗಳಲ್ಲಿ ಸಕ್ರೀಯವಾಗಿರುವ ಇವರನ್ನು ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ.

ಇವರು ಇನ್ನೂ ಹೆಚ್ಚಿನ ಸಾಧನೆ ಮಾಡಲೆಂದು ಶುಭ ಹಾರೈಸುತ್ತೇವೆ. 
 


Share