ಕುಸುಮಾ ಎಚ್. ದೇವಾಡಿಗ : ಹೂವಿನಿಂದ ಅರಳಿದ ಬದುಕು!


ಮಂಗಳೂರು : ಸಣ್ಣ ಪ್ರಾಯದಲ್ಲಿ ಅಬ್ಬಳಿಗೆ ಹೂವು ಬೆಳೆಯುತ್ತಿದ್ದ ಹುಡುಗಿ ಆಕೆ. ಸಂಜೆ ಸಮಯ ಅಬ್ಬಳಿಗೆ ಹೂವಿನ ಗಿಡಕ್ಕೆ ನೀರು ಹಾಕಿ ಹೂವು ಸಂಗ್ರಹಿಸಿ, ಅದನ್ನು ಮಾಲೆ ಮಾಡಿಕೊಂಡು ಮರುದಿನ ಮುಂಜಾನೆ ಬಸ್‍ನಿಲ್ದಾಣದಲ್ಲಿ ಒಂದು  ರೂಪಾಯಿಗೆ ಒಂದು ಮಾಲೆ ಎಂದು ಮಾರಿ ಜೀವನ ನಿರ್ವಹಿಸಿದವರು. ಸ್ವಾವಲಂಬಿಯಾಗಿಯೇ ಬದುಕಬೇಕು ಎಂಬ ತುಡಿತದಿಂದ ಆಕೆ ಅನಂತರ ಉಡುಪು ತಯಾರಿಕಾ ಘಟಕವನ್ನು ಸ್ವಾವಲಂಬಿಯಾಗಿಯೇ ಮಾಡಿಕೊಂಡು 200ರಷ್ಟು ಕೈಗಳಿಗೆ ಉದ್ಯೋಗ ನೀಡುತ್ತಿದ್ದಾರೆ!

ಆಶರ್ಯವಾದರೂ ಇದು ನಿಜ. ಮೂಲತಃ ಉಡುಪಿ ಜಿಲ್ಲೆಯ ಕೋಟ ನಿವಾಸಿ; ಸದ್ಯ ಮಂಗಳೂರಿನಲ್ಲಿ ಸ್ವಾವಲಂಬಿ ಮಹಿಳಾ ಉದ್ಯಮಿ ಎನಿಸಿಕೊಂಡಿರುವ ಕುಸುಮಾ ಎಚ್. ದೇವಾಡಿಗ ಅವರು ಈ ಸಾದಕಿ.

ಹೆಚ್ಚು ಓದುವ ಅವಕಾಶ ಅವರಿಗೆ ಸಿಗಲಿಲ್ಲ ಹೀಗಾಗಿ 10ರ ವಯಸ್ಸಿನಲ್ಲಿಯೇ ಊರಲ್ಲಿ ಅಬ್ಬಳಿಗೆ ಗಿಡವನ್ನು ಬೆಳೆದು ಅದರ ಹೂವುಗಳ ಮಾಲೆ ಮಾಡಿ ಮಾರುವ ಮೂಲಕ ಸ್ವಾವಲಂಬಿ ಜೀವನಕ್ಕೆ ಮೊದಲ ಹೆಜ್ಜೆ ಇಟ್ಟವರು. ಹೀಗೆ ಮುಂದುವರಿಯುತ್ತ ತಿಂಗಳು-ವರ್ಷಗಳೇ ಕಳೆದ ಬಳಿಕೆ ಸರಕಾರಿ ಉದ್ಯೋಗಿಯೊಬ್ಬರನ್ನು ಮದುವೆಯಾದರು. ಬಳಿಕ ಮನೆಯಲ್ಲಿಯೇ ಬ್ಲೌಸ್ ಕಟ್ಟಿಂಗ್ ಮಾಡಲು ಕಲಿತರು; ಹೊಲಿಯುವ ಬಗ್ಗೆ ಅರಿತುಕೊಂಡರು. ಅಷ್ಟರಲ್ಲಿಯೇ ಪತಿಗೆ ಮಂಗಳೂರಿಗೆ ವರ್ಗವಾಗಿ ಅಲ್ಲಿಗೆ ಬಂದರು.

ಇಲ್ಲಿ ಮನೆಯ ಅಕ್ಕ-ಪಕ್ಕದವರು ಬೀಡಿ ಕಟ್ಟುತ್ತಿದ್ದನ್ನು ನೋಡಿ ಅವರ ಜತೆಗೆ ಬೀಡಿ ಕಟ್ಟಲು ಆರಂಭಿಸಿದರು. ಕೆಲವು ಸಮಯ ಹೀಗೆ ಕೆಳೆಯಿತು. 1998ರಲ್ಲಿ ನಗರದ ಗಾರ್ಮೆಂಟ್ ಅಂಗಡಿ ಆರಂಭಿಸಲು ಮುಂದಾದರು. ಯೆಯ್ಯಾಡಿಯ ಜಿಲ್ಲಾ ಸಣ್ಣ ಕೈಗಾರಿಕೆ ಇಲಾಖೆಯಿಂದ ಆರ್ಥಿಕ ನೆರವು ಪಡೆದರು.

ಈ ಸಮಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದ ರುಡ್ ಸೆಟ್‍ನಲ್ಲಿ ಉದ್ಯಮ ಕ್ಷೇತ್ರದ ಬಹು ಆಯಾಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಹೀಗೆ ನಗರದ ಸ್ಟೇಟ್ ಬ್ಯಾಂಕ್‍ನಲ್ಲಿ ಉಡುಪು ತಯಾರಿಕಾ ಘಟಕ ಆರಂಭಿಸಿದ ಅವರು ಸ್ವಾವಲಂಬಿ ಮಹಿಳಾ ಉದ್ಯಮಿ ಎಂಬ ಮಾನ್ಯತೆ ಮಡೆದುಕೊಂಡರು.

ಒಂದೊಂದೇ ಹೆಜ್ಜೆಗಳೊಂದಿಗೆ ಮುಂದುವರಿದ ಅವರು ಈಗ ಕರಾವಳಿ ಬೇರೆ ಬೇರೆ ಭಾಗಗಳಲ್ಲಿ ಶಾಖೆಗಳನ್ನು ಆರಂಭಿಸಿದ್ದಾರೆ. ಈ ಮೂಲಕ ಸದ್ಯ ಇವರು 200ಕ್ಕೂ ಅಧಿಕ ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಿವಿಧ ರೀತಿಯಲ್ಲಿ ಉದ್ಯೋಗ ದೊರಕಿಸಿದ್ದಾರೆ.

ಕರ್ನಾಟಕ ರಾಜ್ಯ ದೇವಾಡಿಗರ ಸಂಘ, ಮಂಗಳೂರು ಹಾಗೂ  ವಿವಿಧ ಸಂಘಟನೆಗಳಿಂದ ಪದಾಧಿಕಾರಿ ಹುದ್ದೆಯನ್ನು ಅಲಂಕರಿಸಿದ್ದಾರೆ.


Share