ಗುರುವಿಲ್ಲದೆ ತನ್ನ ಗುರಿ ಸಾಧಿಸಿದ ಏಕಲವ್ಯ ಸಾಧಕಿ: ಅಕ್ಷತಾ ದೇವಾಡಿಗ

ಕೋಟ: ಸಾಧಿಸುವ ಛಲವಿದ್ದರೆ ಅಸಾಧ್ಯ ಯಾವುದೂ ಇಲ್ಲ ಎಂಬ ಮಾತಿದೆ. ಅದೇ ರೀತಿ 6ನೇ ತರಗತಿಗೆ ಶಾಲೆ ತ್ಯಜಿಸಿದ್ದ ಬಾಲಕಿಯೋರ್ವಳು 10 ವರ್ಷಗಳ ಬಳಿಕ ಶಿಕ್ಷಣದ ಮಹತ್ವ ಅರಿತು ನೇರವಾಗಿ ಎಸೆಸೆಲ್ಸಿ ಪರೀಕ್ಷೆ ಕಟ್ಟಿ ತರಗತಿಗೆ ಹಾಜರಾಗದೆ, ಗುರುಗಳ ಸಹಾಯವಿಲ್ಲದೆ ಮನೆಯಲ್ಲಿ ಓದಿ ಶೇ. 84 ಅಂಕಗಳೊಂದಿಗೆ ಉತ್ತೀರ್ಣಳಾಗಿ, ಈ ಬಾರಿ ದ್ವಿತೀಯ ಪಿಯುಸಿ ಬರೆದು ಕಲಾವಿಭಾಗದಲ್ಲಿ ಶೇ. 85 ಅಂಕದೊಂದಿಗೆ ಉತ್ತೀರ್ಣಳಾಗಿದ್ದಾಳೆ.

ಶಿರಿಯಾರ ಸಮೀಪದ ಬಾರಿಬೈಲು ನಿವಾಸಿ, ಮುಂಬಯಿ ಉದ್ಯಮಿ ಮಹಾಬಲ ದೇವಾಡಿಗ ಹಾಗೂ ಆಶಾ ದೇವಾಡಿಗ ಅವರ ಪುತ್ರಿ ಅಕ್ಷತಾ ದೇವಾಡಿಗ ಈ ಸಾಧನೆ ಮಾಡಿದ ಯುವತಿ.

6ನೇ ತರಗತಿಗೆ ಶಾಲೆ ತ್ಯಜಿಸಿದ್ದಳು
ಈಕೆ ಬಾಲ್ಯದಿಂದಲೂ ಶಿರಿಯಾರ ಬಾರಿಬೈಲಿನ ತನ್ನ ಅಜ್ಜ ನಾರಾಯಣ ದೇವಾಡಿಗರ ಆಶ್ರಯದಲ್ಲಿ ಬೆಳೆದಿದ್ದಳು. ಸ್ಥಳೀಯ ಸಾೖಬ್ರಕಟ್ಟೆಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಕಲಿಯುತ್ತಿದ್ದಾಗ ಶಿಕ್ಷಣದ ಕುರಿತು ಆಸಕ್ತಿ ಕುಂದಿತ್ತು. ಮನೆಯವರು, ಸ್ನೇಹಿತರು, ಅಕ್ಕಪಕ್ಕ ದವರು ಎಷ್ಟೇ ಆಗ್ರ ಹಿಸಿದರೂ ಮಾತು ಕೇಳದೆ ಶಾಲೆ ತ್ಯಜಿಸಿದಳು. ಅನಂತರ 10 ವರ್ಷ ಮನೆಯಲ್ಲೇ ಇದ್ದಳು.

ಏಕಲವ್ಯ ಸಾಧಕಿ
10 ವರ್ಷಗಳ ಅನಂತರ ಈಕೆಗೆ ತನ್ನ ಸ್ನೇಹಿತರು ಉನ್ನತ ಶಿಕ್ಷಣ ಪಡೆದು ಸಾಧನೆಯ ಹಾದಿಯಲ್ಲಿರುವುದನ್ನು ಕಂಡು ನಾನು ಕೂಡ ಓದಿ ಒಳ್ಳೆಯ ಉದ್ಯೋಗ ಪಡೆಯಬೇಕೆನಿಸಿತು. ಹೀಗಾಗಿ ಮನೆಯವರಿಗೆ ತಿಳಿಸಿ ಉಡುಪಿಯ ಖಾಸಗಿ ಟ್ಯುಟೋರಿಯಲ್‌ನಲ್ಲಿ ನೇರವಾಗಿ ಎಸೆಸೆಲ್ಸಿ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿ ಕೊಂಡಳು. ಅಲ್ಲಿ ನಿತ್ಯದ ತರಗತಿಗೆ ಹಾಜರಾಗಲು ಅವಕಾಶವಿದ್ದರೂ ವಯಸ್ಸಿನ ಕಾರಣಕ್ಕೆ ಮುಜುಗರವಾಗುತ್ತದೆ ಮತ್ತು ಅಕ್ಕ-ಪಕ್ಕದವರು ಗೇಲಿ ಮಾಡುತ್ತಾರೆ ಎನ್ನುವ ನಾಚಿಕೆಯಿಂದ ಮನೆಯಲ್ಲೇ ಕುಳಿತು ಅಭ್ಯಾಸ ಆರಂಭಿಸಿದಳು. ಗುರುಗಳ ಸಹಾಯವಿಲ್ಲದೆ ಕೇವಲ ಗೈಡ್‌ ಮುಂತಾದವುಗಳನ್ನು ಬಳಸಿ ಅಭ್ಯಾಸ ಮಾಡಿದಳು. ಹೀಗೆ ಕಠಿನ ಪರಿಶ್ರಮಪಟ್ಟು ಎಸೆಸೆಲ್ಸಿಯಲ್ಲಿ ಕಳೆದ ವರ್ಷ ಶೇ. 84 ಅಂಕದೊಂದಿಗೆ ಉತ್ತೀರ್ಣಳಾದ ಈಕೆ ಈ ಬಾರಿ ಅದೇ ರೀತಿ ಪಿಯುಸಿ ಕಲಾವಿಭಾಗದ ಪರೀಕ್ಷೆೆ ಬರೆದು ಶೇ. 85 ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಾಳೆ.

ಆರಂಭದಲ್ಲಿ ಶಿಕ್ಷಣದ ಕುರಿತು ಆಸಕ್ತಿ ಇರಲಿಲ್ಲ. ಹೀಗಾಗಿ 6ನೇ ತರಗತಿಗೆ ಶಾಲೆ ಬಿಟ್ಟಿದ್ದೆ. 10 ವರ್ಷಗಳ ಬಳಿಕ ಸಾಧನೆಗೆ ಶಿಕ್ಷಣ ಅಗತ್ಯ ಎನ್ನುವ ಸತ್ಯ ಅರಿವಾಗಿತ್ತು. ಕಷ್ಟವನ್ನು ಸವಾಲಾಗಿ ಸ್ವೀಕರಿಸಿ ಎಸೆಸೆಲ್ಸಿ, ಪಿಯುಸಿ ಪರೀಕ್ಷೆ ಕಟ್ಟಿ ಉತ್ತಮ ಅಂಕದಿಂದ ಉತ್ತೀ ರ್ಣಳಾದೆ. ಮುಕ್ತ ವಿ.ವಿ. ಮೂಲಕ ಪದವಿ ಪಡೆದು ಉದ್ಯೋಗಕ್ಕೆ ಸೇರುವ ಹಂಬಲವಿದೆ.
– ಅಕ್ಷತಾ, ಸಾಧಕ ವಿದ್ಯಾರ್ಥಿನಿ

ಬರಹ-ರಾಜೇಶ್‌ ಗಾಣಿಗ ಅಚ್ಲಾಡಿ


Share