ನಿಜಾಮುದ್ದೀನ್‌ ಎಕ್ಸ್‌ಪ್ರಸ್‌ ರೈಲಿನ ಬೆಂಕಿ ನಂದಿಸಿದ ದೇವಾಡಿಗ ಯುವಕರ ಕಾರ್ಯಕ್ಕೆ ಮೆಚ್ಚುಗೆ

ಉಪ್ಪುಂದ: ದಿಲ್ಲಿಯಿಂದ ಕೇರಳದತ್ತ ಧಾವಿಸುತ್ತಿದ್ದ ನಿಜಾಮುದ್ದೀನ್‌ ಎಕ್ಸ್‌ಪ್ರಸ್‌ ರೈಲಿನ ಎಸಿ ಬೋಗಿಗೆ ಶನಿವಾರ ತಡರಾತ್ರಿ ಬೆಂಕಿ ಹೊತ್ತಿಕೊಂಡ ವಿಷಯ ತಿಳಿದ ತತ್‌ಕ್ಷಣ ನೆರವಿಗೆ ಧಾವಿಸಿದ ಖಂಬದಕೋಣೆ ಗೋವಿಂದ ದೇವಸ್ಥಾನ ಕಬ್ಬಿನ ಗದ್ದೆ ಬಳಿಯ ಯುವಕರ ಸಮಯಪ್ರಜ್ಞೆ ಮತ್ತು ಶ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಸೋಮವಾರ ಘಟನ ಸ್ಥಳಕ್ಕೆ ಭೇಟಿಕೊಟ್ಟ ಸುದ್ದಿಗಾರರಿಗೆ ಸ್ಥಳೀಯ ಯುವಕರು ಘಟನೆ ಬಗ್ಗೆ ಮಾಹಿತಿ ನೀಡಿದರು.

ರಾತ್ರಿ 1.15ರ ಹೊತ್ತಿಗೆ ಜನರ ಕೂಗಾಟ ಕೇಳಿಸಿತು. ಮನೆಗಳ ದನಕರುಗಳು ಕೂಗಿಕೊಂಡವು. ಎಚ್ಚರಗೊಂಡ ನಮಗೆ ರೈಲಿನ ಒಂದು ಬೋಗಿ ಹೊತ್ತಿ ಉರಿಯುತ್ತಿರುವುದು ಗೋಚರಿಸಿತು. ಎರಡೂ ಬಾಗಿಲುಗಳಿಂದ ಹೊಗೆ ಬರುತಿತ್ತು. ಪರಿಸರದ 15 ಮನೆಗಳ 25 ಯುವಕರು ಸ್ಥಳಕ್ಕೆ ಧಾವಿಸಿದರು.

ಹರ್ಕೇರಿಮನೆ ಮಂಜುನಾಥ ದೇವಾಡಿಗ ಸಹಿತ ಹಲವರು ಉರಿಯುತ್ತಿರುವ ಬೋಗಿಯಲ್ಲಿದ್ದ ಎಲ್ಲರನ್ನು ಹೊರ ಬರಲು ಸಹಾಯ ಮಾಡಿದರು ಎಂದರು.

ರೈಲು ನಿಂತಲ್ಲಿ ಸಾಕಷ್ಟು ನೀರಿತ್ತು
ರೈಲು ಧಾರಾಳ ನೀರು, ವಿದ್ಯುತ್‌ ಪಂಪ್‌ ಇರುವ ಹರ್ಕೆರೆ ಮನೆ, ಕಬ್ಬನಗದ್ದೆಮನೆ ಬಳಿ ನಿಂತಿತ್ತು. ಹರ್ಕೆರೆಮನೆ ಮಂಜು ದೇವಾಡಿಗ, ರಮೇಶ ದೇವಾಡಿಗ ಪೈಪುಗಳನ್ನು ಜೋಡಿಸಿ, ಪಂಪ್‌ ಚಾಲನೆ ಮಾಡಿದರು. ಧರ್ಮೇಂದ್ರ ದೇವಾಡಿಗ, ಶ್ರೀನಿವಾಸ ದೇವಾಡಿಗ, ನಾಗೇಂದ್ರ ದೇವಾಡಿಗ, ಹೊಸಮನೆ ನಾಗ ದೇವಾಡಿಗ ನೀರು ಹಾಯಿಸಿ ಬೆಂಕಿ ಹರಡುವುದನ್ನು ತಡೆದರು.

ಸಂದೀಪ ದೇವಾಡಿಗ ಹಕ್ಲಾಡಿಮನೆ, ಮರವಂತೆಮನೆ ಲಕ್ಷ್ಮಣ ದೇವಾಡಿಗ ಕುಂದಾಪುರ ಮತ್ತು ಭಟ್ಕಳ ಅಗ್ನಿ ಶಾಮಕ ಠಾಣೆಗೆ, 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದರು. 108 ವಾಹನ ಮತ್ತು ಅಗ್ನಿ ಶಾಮಕ ಸಿಬಂದಿ ಒಂದೂವರೆ ತಾಸಿನ ಬಳಿಕ ಸ್ಥಳಕ್ಕೆ ಬಂದರು. ಅಷ್ಟರಲ್ಲಿ ಸ್ಥಳೀಯರೇ ಬೆಂಕಿ ನಂದಿಸಿದ್ದರು.

ರೈಲಿನಿಂದ ಹಾರುವಾಗ ಕಾಲಿಗೆ ಮುಳ್ಳು ಚುಚ್ಚಿಸಿಕೊಂಡಿದ್ದ ಮಹಿಳೆಯರು, ಮಕ್ಕಳನ್ನು ಸ್ಥಳೀಯರು ಉಪಚರಿಸಿದರು. ನೀರು ನೀಡಿ ಸಂತೈಸಿದರು.ಎಲ್ಲ ಮುಗಿಯುವಾಗ ನಸುಕಿನ 3 ಗಂಟೆ ಆಗಿತ್ತು. ಬಳಿಕ ರೈಲನ್ನು ಹಿಮ್ಮುಖವಾಗಿ ಬಿಜೂರು ನಿಲ್ದಾಣಕ್ಕೆ ಒಯ್ಯಲಾಯಿತು. ಅಲ್ಲಿ ವೈದ್ಯರು ಅಸ್ವಸ್ಥರಾದವರಿಗೆ ಪ್ರಥಮ ಚಿಕಿತ್ಸೆ ನೀಡಿದರು ಎಂದು ಯುವಕರು ವಿವರಿಸಿದರು.

ರೈಲು ಬಿಜೂರು ನಿಲ್ದಾಣ ಮತ್ತು ಎರಡು ಗೇಟ್‌ಗಳನ್ನು ದಾಟಿ ಬಂದಿದ್ದರೂ ಅಲ್ಲಿನ ಸಿಬಂದಿಗೆ ರೈಲು ಬೋಗಿಗೆ ಬೆಂಕಿ ತಗಲಿರುವುದು ತಿಳಿಯದಿದ್ದುದು ಆಶ್ಚರ್ಯದ ಸಂಗತಿ ಎಂದೂ ಸ್ಥಳೀಯರು ತಿಳಿಸಿದರು.


Share