pvec230416h K Award 01.jpg

ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ, ಸಿಐಡಿ ಡಿಐಜಿ ಸೋನಿಯಾ ನಾರಂಗ್‌, ಲೋಕಾಯುಕ್ತ ಎಸ್ಪಿ ಸೀಮಾ ಲಾತ್ಕರ್, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಕೆ.ಬಿ.ಲಿಂಗೇಗೌಡ ಮತ್ತು ಸುರೇಶ್ ದೇವಾಡಿಗ  ಪಡುಕೋಣೆಯವರಿಗೆ ಇತರರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಸಕ ಬೈರತಿ ಬಸವರಾಜು, ಸಚಿವ ಕೆ.ಜೆ.ಜಾರ್ಜ್, ಮೇಯರ್‌ ಮಂಜುನಾಥ್ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಶಾಸಕ ಎಸ್.ಟಿ.ಸೋಮಶೇಖರ್ ಮೊದಲಾದವರು ಚಿತ್ರದಲ್ಲಿದ್ದಾರೆ.

ಬೆಂಗಳೂರು :  ‘ಆಡಳಿತದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಬಿಬಿಎಂಪಿಯನ್ನು ವಿಭಜನೆ ಮಾಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

padukone2.jpg

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಕೆಂಪೇಗೌಡ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ‘2006ರಲ್ಲಿ ನಗರದ ವಿಸ್ತೀರ್ಣ 220 ಚದರ ಕಿ.ಮೀ ಇತ್ತು. ಈಗ ನಗರವು 800 ಚದರ ಕಿ.ಮೀ ವ್ಯಾಪ್ತಿ ಹೊಂದಿದೆ. 198 ವಾರ್ಡ್‌ಗಳಿವೆ. ಜನಸಂಖ್ಯೆ ಒಂದು ಕೋಟಿಯನ್ನು ಮೀರಿದೆ. ಹೀಗಾಗಿ ಅದನ್ನು ವಿಭಜನೆ ಮಾಡಬೇಕು ಎಂಬ ಚಿಂತನೆ ಮೊದಲೇ ನಮ್ಮ ಮುಂದೆ ಇತ್ತು’ ಎಂದರು.

padukone1a.jpg

‘ಚುನಾವಣೆ ಬಂದಿದ್ದರಿಂದ ಮತ್ತು ನ್ಯಾಯಾಲಯ ಕೂಡ ಒಪ್ಪದಿದ್ದುದರಿಂದ ಅದು ಸಾಧ್ಯವಾಗಲಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ವಿಭಜನೆ ಮಾಡುವುದು ಒಳಿತು. ಬಿಬಿಎಂಪಿ ವಿಭಜನೆ ಆಗಬೇಕು ಎಂದು ಚರ್ಚೆ ಆರಂಭಿಸಿದವರೆ ನಂತರ ಅದನ್ನು ವಿರೋಧಿಸಿದರು ಎಂಬುದು ವಿಪರ್ಯಾಸದ ಸಂಗತಿ’ ಎಂದು ಹೇಳಿದರು.

‘ಕೆಂಪೇಗೌಡ ಅವರು ದೂರದೃಷ್ಟಿ ಇಟ್ಟುಕೊಂಡು ನಗರವನ್ನು ನಿರ್ಮಾಣ ಮಾಡಿದರು. ಆದರೆ, ಇಂದು ನಗರವು ತನ್ನ ವ್ಯಾಪ್ತಿಯನ್ನು ಮೀರಿ ಬೆಳೆದಿದೆ. ನಗರಕ್ಕೆ ವಾರ್ಷಿಕ 19 ಟಿಎಂಸಿ ಅಡಿ ನೀರು ಬೇಕಾಗುತ್ತಿದೆ. ಮುಂದಿನ ದಿನಗಳಲ್ಲಿ 30 ಟಿಎಂಸಿ ನೀರು ಬೇಕಾಗಬಹುದು. ನೀರಿನ ಸಮಸ್ಯೆಯನ್ನು ನಿವಾರಿಸಲು ಸಾರ್ವಜನಿಕರು ಕಡ್ಡಾಯವಾಗಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.

‘ನನಗೂ ಮೊದಲು  ಮಾತನಾಡಿದ ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ನಗರದಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ. ನಗರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಹೇಳಿದರು. ಆದರೆ, ನಮ್ಮ ಸರ್ಕಾರ ₹ 4,520 ಕೋಟಿ ಅನುದಾನ ನೀಡಿದೆ. ಹಿಂದಿನ ಯಾವ ಸರ್ಕಾರವೂ ಇಷ್ಟು ಅನುದಾನ ನೀಡಿಲ್ಲ’ ಎಂದರು.

‘ಕಸದಿಂದ ಇಂಧನ ಉತ್ಪಾದನೆ  ಮಾಡಿದಾಗ ತ್ಯಾಜ್ಯ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ. ಸಾರ್ವಜನಿಕರು ಮೂಲದಲ್ಲೇ ಕಸ ವಿಂಗಡಣೆ ಮಾಡಬೇಕು.  ಪಾಲಿಕೆಯ ಎಲ್ಲ ಸದಸ್ಯರು ಕಸದ ಸಮಸ್ಯೆ ನಿವಾರಿಸಲು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು.  ಹೀಗಾಗಿಯೇ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಕರೆ ನೀಡಿದರು. ‘ನಗರದ ಗತ ವೈಭವವನ್ನು ಮತ್ತೆ  ನಿರ್ಮಾಣ ಮಾಡುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿಯೇ ಬೆಂಗಳೂರಿಗೆ ಪ್ರತ್ಯೇಕ ಸಚಿವರನ್ನು ನೇಮಕ ಮಾಡಲಾಗಿದೆ’ ಎಂದರು.

‘ನಗರವನ್ನು ಹಿಂದೆ ಉದ್ಯಾನ ನಗರಿ ಎಂದು ಕರೆಯಲಾಗುತ್ತಿತ್ತು. ಈಗ ಮರಗಳು ನಾಶವಾಗಿವೆ. ಹೀಗಾಗಿ ಪ್ರತಿ ಮನೆಯಿಂದ ಎರಡು ಸಸಿ ನೆಡಬೇಕು. ಪಾಲಿಕೆ ವತಿಯಿಂದ ರಸ್ತೆ ಬದಿ ಗಿಡ ಬೆಳೆಸಲು ಕ್ರಮ ಕೈಗೊಳ್ಳಬೇಕು’ ಎಂದರು. ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ: ಬಿಬಿಎಂಪಿ ವತಿಯಿಂದ  ಶುಕ್ರವಾರ ಕೆಂಪೇಗೌಡ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮೇಯರ್ ಬಿ.ಎನ್.ಮಂಜುನಾಥ ರೆಡ್ಡಿ ಅವರು ಬೆಳಿಗ್ಗೆ ಪಾಲಿಕೆ ಆವರಣದಲ್ಲಿರುವ ಕೆಂಪೇಗೌಡ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಬಳಿಕ ಮೇಯರ್ ಅವರು ಲಾಲ್‌ಬಾಗ್‌ನಲ್ಲಿರುವ ಗಡಿಗೋಪುರಕ್ಕೆ ಪೂಜೆ ಸಲ್ಲಿಸಿದರು.

ನಗರದ ನಾಲ್ಕೂ ದಿಕ್ಕಿನಲ್ಲಿ ನಿರ್ಮಿಸಲಾಗಿರುವ ಗಡಿಗೋಪುರಗಳಿಂದ ಪಾಲಿಕೆ ಕೇಂದ್ರ ಕಚೇರಿಯವರೆಗೆ ನಡೆದ ಕೆಂಪೇಗೌಡ ಅವರ ದಿವ್ಯ ಜ್ಯೋತಿ ಯಾತ್ರೆ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿದ್ದವು. ಕೆಂಪೇಗೌಡ ಅವರ ಸಮಾಧಿ ಸ್ಥಳವಾದ ಮಾಗಡಿ ತಾಲ್ಲೂಕಿನ ಕೆಂಪಾಪುರದಿಂದ ಪಾಲಿಕೆ ಕೇಂದ್ರ ಕಚೇರಿವರೆಗೆ ತೆರೆದ ವಾಹನದಲ್ಲಿ ದಿವ್ಯ ಜ್ಯೋತಿ ಯಾತ್ರೆ ನಡೆಯಿತು.

‘ತೆರಿಗೆ ಪಾವತಿಸಿ’
‘ಬಿಬಿಎಂಪಿ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ. ಆದರೆ, ಬಿಬಿಎಂಪಿ ಹೆಚ್ಚಿನ ಸಂಪನ್ಮೂಲ ಕ್ರೋಡೀಕರಿಸಲು ಕ್ರಮ ಕೈಗೊಳ್ಳಬೇಕು. ನನಗೆ ಇರುವ ಮಾಹಿತಿ ಪ್ರಕಾರ ಶೇಕಡಾ 30ರಷ್ಟು ಆಸ್ತಿಯಿಂದ ಪಾಲಿಕೆಗೆ ತೆರಿಗೆ ಬರುತ್ತಿಲ್ಲ. ಸಾರ್ವಜನಿಕರು ಸೌಲಭ್ಯಗಳನ್ನು ಕೇಳುವ ಜತೆಗೆ ಪ್ರಾಮಾಣಿಕವಾಗಿ ತೆರಿಗೆ ಪಾವತಿಸಬೇಕು’ ಎಂದು ಸಿದ್ದರಾಮಯ್ಯ ಹೇಳಿದರು.