ಕಲೆ-ಸಾಂಸ್ಕೃತಿಕ ಸೇವೆಯಲ್ಲಿ ಬದುಕಿನ ಸೊಗಸನ್ನು ಕಂಡ ಮಾಧವ ರಾವ್

ಬೈಂದೂರು: ವೃತ್ತಿಯಿಂದ ನಿವೃತ್ತರಾದ ಅನೇಕರು ಹೊತ್ತು ಕಳೆವುದೆಂತು ಚಿಂತಿಸಿದರೆ, ಕಲೆ-ಸಾಂಸ್ಕೃತಿಕ ಬದುಕಿನಲ್ಲಿ ಸೊಗಸು ಕಾಣುವವರು ಇನ್ನಷ್ಟು ಸಮಯ ದೊರೆಯಿತೆಂದು ಹಿರಿ ಹಿರಿ ಹಿಗ್ಗುವರು. ಪಶು ಆಸ್ಪತ್ರೆಯಲ್ಲಿ ಸಹಾಯಕರಾಗಿ ಬಿಡುವಿಲ್ಲದ ಸರ್ಕಾರಿ ಸೇವೆಯ ನಡುವೆಯೂ ನಾಟಕ, ಯಕ್ಷಗಾನ, ಧಾರ್ಮಿಕ ಕಾರ್ಯಕ್ರಮಗಳೇ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಬೈಂದೂರಿನ ಬಹು ಆಯಾಮೀ ವ್ಯಕ್ತಿತ್ವದ ಹಿರಿಯ ಕಲಾವಿದ ಮಾಧವರಾವ್ ಇಂತಹವರ ಶ್ರೇಣಿಗೆ ಸೇರುತ್ತಾರೆ.

ಬೈಂದೂರಿನ ಅಣ್ಣಪ್ಪ ದೇವಾಡಿಗ ಮತ್ತು ಅಮ್ಮಣ್ಣಿಯವರ 6 ಗಂಡು ಮಕ್ಕಳು ಮತ್ತು 2 ಹೆಣ್ಣು ಮಕ್ಕಳ ತುಂಬು ಕುಟುಂಬದಲ್ಲಿ ಎರಡನೇಯವರಾದ ಮಾಧವ ರಾವ್ ಅವರಿಗೆ ಕೌಟುಂಬಿಕವಾಗಿ ಬಡತನ ಬಳುವಳಿಯಾಗಿ ದೊರೆತರೂ ಪ್ರಾಯಶ: ಸಾಂಸ್ಕೃತಿಕ ಶ್ರೀಮಂತಿಕೆ ದೈವದತ್ತವಾಗಿ ಒಲಿದಿತ್ತು. 40-50 ವರ್ಷಗಳ ಹಿಂದೆ ವಿನಾಯಕ ಚತುರ್ಥಿ, ಶಾರದಾ ಉತ್ಸವ, ಊರಿನ ಜಾತ್ರೆಯೇ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳೇ ಮುಖ್ಯ ಜನಾಕರ್ಷಣೆಯಾಗಿದ್ದಾಗ ಮಾಧವ ರಾವ್ ಇವುಗಳೆಲ್ಲೆಲ್ಲಾ ಮಂಚೂಣಿಯಲ್ಲಿರುತ್ತಿದ್ದವರು. ಸರ್ಕಾರಿ ಸೇವೆಯ ಸಲುವಾಗಿ ಶಂಕರನಾರಾಯಣದಲ್ಲಿದ್ದಾಗ ನಾಲ್ಕು ವರ್ಷಗಳ ಕಾಲ ಅಲ್ಲಿ ಸತ್ಯ ಸಾಯಿ ಭಜನಾ ಮಂಡಳಿ ಸ್ಥಾಪಿಸಿ ಜನಪ್ರಿಯರಾಗಿದ್ದರು.

ಇವರ ಸತ್ಯ ಪ್ರಸಾದ ಮತ್ತು ಸತ್ಯ ಪ್ರಸನ್ನ ಎಂಬ ಎರಡು ಗಂಡು ಮಕ್ಕಳಲ್ಲಿ ಎರಡನೇಯವನಾದ ಸತ್ಯಪ್ರಸನ್ನ ತಂದೆಯಂತೆಯೇ ಲಾವಣ್ಯದ ನಾಟಕಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟದ ಪುರಸ್ಕಾರ ಪಡೆದಿರುತ್ತಾರೆ.

70ರ ದಶಕದಲ್ಲಿ ಡಾII ವೈ ಚಂದ್ರಶೇಖರ ಶೆಟ್ಟಿಯವರಿಂದ ಯಕ್ಷಗಾನ ತರಬೇತಿ ಪಡೆದು ಕಳವಾಡಿ ಯಕ್ಷಗಾನ ಸಂಘದ ತಂಡದೊಂದಿಗೆ ಬೈಂದೂರು, ಕಳವಾಡಿ, ಯಡ್ತರೆ, ಏಳಜಿತ್, ಮೂಡನಗದ್ದೆ ಮುಂತಾದ ಕಡೆಗಳಲ್ಲಿ ಭೀಷ್ಮ ವಿಜಯ, ಭಸ್ಮಾಸುರ ಮೋಹಿನಿ, ದೇವಿ ಮಹಾತ್ಮೆ,ಬೇಡರ ಕಣ್ಣಪ್ಪ, ಶ್ರೀ ಕೃಷ್ಣ ಗಾರುಡಿ, ರುಕ್ಮಿಣಿ ಸ್ವಯಂವರ ಇತ್ಯಾದಿ ಅನೇಕ ಯಕ್ಷಗಾನ ಪ್ರದರ್ಶನ ನೀಡಿದ್ದರು. ಬೈಂದೂರಿನಲ್ಲಿ ಲಾವಣ್ಯ (ರಿ) ಕಲಾಸಂಸ್ಥೆಯ ಸ್ಥಾಪನೆಯೊಂದಿಗೆ 80ರ ದಶಕದಲ್ಲಿ ಇವರ ಒಲವು ನಾಟಕದ ಕಡೆಗೆ ಹೊರಳಿತು. ರಂಗಚಟುವಟಿಕೆಗಾಗಿ ರಾಜ್ಯದಾದ್ಯಂತ ಹೆಸರು ಮಾಡಿರುವ ‘ಲಾವಣ್ಯ’ದ ಸ್ಥಾಪಕ ಸದಸ್ಯರಾಗಿರುವ ಮಾಧವ ರಾವ್ ‘ರಥಬೀದಿ ಗೆಳೆಯರು’,‘ಗೆಳೆಯರ ಬಳಗ’ ಗಂಗೊಳ್ಳಿಯ ‘ಯುವಕ ಮಂಡಳ’, ಪಡುವರಿಯ ‘ಮಿತ್ರ ಮಂಡಳಿ’ ಮುಂತಾದ ನಾಟಕ ತಂಡಗಳೊಂದಿಗೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಈ ತಂಡಗಳೊಂದಿಗೆ ಬೈಂದೂರು, ಜೋಗ, ಕಾರಗಡಿ, ಹೊಸನಗರ,ಬಾರಕೂರು, ಕೊಲ್ಲೂರು, ಕುಂದಾಪುರ ಮುಂತಾದ ಕಡೆ ನಾಟಕಗಳಲ್ಲಿ ಅಭಿನಯಿಸಿ ಜನಮೆಚ್ಚಿಗೆ ಪಡೆದಿದ್ದಾರೆ. ಸತ್ಯ ಹರಿಶ್ಚಂದ್ರ,ರಾಘವೇಂದ್ರ ಸ್ವಾಮಿ ಮಹಾತ್ಮೆ, ದಮಯಂತಿ,ಆನಂದ ನಿವಾಸ, ಹೃದಯ ದೇಗುಲ,ಗೌಡ್ರ ಗದ್ಲ, ರೊಟ್ಟಿಋಣ,ಲಚ್ಚಿ ಮುಂತಾದ 30ಕ್ಕೂ ಹೆಚ್ಚು ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ ಇವರ ಹಾಸ್ಯ ಮತ್ತು ಸ್ತ್ರೀ ಪಾತ್ರಗಳ ನೆನಪು ಜನಮಾನಸದಲ್ಲಿ ಇಂದಿಗೂ ಹಚ್ಚ ಹಸಿರಾಗಿದೆ. ಕುಂದಾಪುರದ ‘ರೂಪಕಲಾ’ ತಂಡದ ಬಾಲಕೃಷ್ಣ ಪೈ ನಿರ್ದೇಶನದ ನಾಟಕಗಳಿಗೆ ಸಂಗೀತ ತಂಡದೊಂದಿಗೆ ಇವರು ಭಾಗವಹಿಸಿದ್ದರು. ಉತ್ತಮ ತಬಲಾ ವಾದಕರಾಗಿದ್ದ ಇವರು ಸುತ್ತಮುತ್ತಲ ಊರುಗಳಲ್ಲಿ ಧಾರ್ಮಿಕ-ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ತಮ್ಮ ಅವಶ್ಯಕತೆ ಇದ್ದಲ್ಲೆಲ್ಲಾ ನಿಸ್ವಾರ್ಥವಾಗಿ ಅಹೋರಾತ್ರಿ ಭಾಗವಹಿಸಿ ದುಡಿದವರು.

ಬೈಂದೂರಿನ ರೋಟರಿ, ಲಯನ್ಸ್,ಯುನೆಸ್ಕೋ ಕ್ಲಬ್,ಲಾವಣ್ಯ, ಸುರಭಿ ಮುಂತಾದ ಸಂಘಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟ ಈ ಹಿರಿಯ ಕಲಾವಿದರು ಇಂದಿಗೂ‘ಲಾವಣ್ಯ(ರಿ) ಕಲಾ ಸಂಸ್ಥೆಯ ಜತೆಯಲ್ಲಿ ಬೈಂದೂರಿನ ವತ್ತಿನಕಟ್ಟೆ ಶ್ರೀ ಮಹಾಸತಿ ದೇವಸ್ಥಾನ, ಶಾರದೋತ್ಸವ, ಗಣೇಶೋತ್ಸವ ಮುಂತಾದ ಸಂಘ- ಸಂಸ್ಥೆಗಳ ಸಕ್ರಿಯ ಸದಸ್ಯರು.

74ರ ಈ ಇಳಿ ವಯಸ್ಸಲ್ಲೂ ಕಲೆ-ಸಾಂಸ್ಕೃತಿ-ಧಾರ್ಮಿಕ ಕಾರ್ಯಕ್ರಮಗಳೆಡೆಗೆ ಇವರ ತುಡಿತದಲ್ಲಿ ಒಂದಿನಿತೂ ಇಳಿಕೆ ಕಂಡಿಲ್ಲ.

~ -ಬೈಂದೂರು ಚಂದ್ರಶೇಖರ ನಾವಡ


Share